ರಂಗನಾಯಕ ರಾಜೀವಲೋಚನ
ರಾಗ: ಮೋಹನ            ತಾಳ: ಅಟ್ಟ
ರಂಗನಾಯಕ ರಾಜೀವಲೋಚನ
ರಮಣನೆ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತ  ||ಪಲ್ಲವಿ||

ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ  ||೧||

ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕೈಮುಗಿದು ಓಲೈಪರು
ಘನ ಶುಕ ಶೌನಕ ವ್ಯಾಸ ವಾಲ್ಮೀಕರು 
ನೆನೆದು ಕೊಂಡಾಡುವರೊ ಹರಿಯೆ     || ೨ ||

ಸುರರು ಕಿನ್ನರರು ಕಿಂಪುರುಷರು ಉರಗರು 
ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದುದಯಾಚಲದಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀಹರಿಯೆ   |೩ ||

ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ || ೪ ||

ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೆ    || ೫ || ದಾಸವಾಣಿ
   --೦--
ರಚನೆ:ಪುರಂದರದಾಸರು.

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ